ತಿರುವನಂತಪುರ -
ಕೇರಳ ರಾಜ್ಯದ ರಾಜಧಾನಿ; ತಿರುವನಂತಪುರ  ಜಿಲ್ಲೆಯ ಮುಖ್ಯ ಪಟ್ಟಣ.  ಜನಸಂಖ್ಯೆ 4,09,627 (1971). ಇದು ಹಿಂದೆ ತಿರುವಾಂಕೂರು ಸಂಸ್ಥಾನದ ಮುಖ್ಯ ಪಟ್ಟಣವಾಗಿತ್ತು.  ಇದೊಂದು ದೊಡ್ಡ ವ್ಯಾಪಾರಕೇಂದ್ರ ಹಾಗೂ ಭಾರತದ ಅತ್ಯಂತ ದಕ್ಷಿಣದ ರೇವುಪಟ್ಟಣ.  ಇಲ್ಲಿಂದ ಮುಂಬೈ ಮದ್ರಾಸುಗಳಿಗೆ ರೈಲು ಹಾಗೂ ವಿಮಾನ ಸೌಲಭ್ಯ ಉಂಟು.

ಈ ನಗರ ಸಮುದ್ರಕ್ಕೆದುರಾಗಿರುವ ಪಶ್ಚಿಮ ಘಟ್ಟಗಳಿಗೆ ಸೇರಿದ ಒಂದು ಎತ್ತರವಾದ ದಿಣ್ಣೆಯ ಮೇಲಿದೆ.  ಆದ್ದರಿಂದ ಈ ಸ್ಥಳದಿಂದ ಕಾಣುವ ದೃಶ್ಯ ಅತ್ಯಂತ ಮನಮೋಹಕವಾದ್ದು.  ಇಲ್ಲಿ ಅನೇಕ ಸರ್ಕಾರಿ ಕಟ್ಟಡಗಳೂ ಭವ್ಯ ಭವನಗಳೂ ಇವೆ.  ಸರ್ಕಾರಿ ಸಚಿವಾಲಯ, ನೇಪಿಯರ್ ವಸ್ತುಸಂಗ್ರಹಾಲಯ, ವಿಕ್ಟೊರಿಯ ಜ್ಯೂಬಿಲಿ ಪುರಭವನ - ಇವನ್ನು ಮುಖ್ಯವಾಗಿ ಹೆಸರಿಸಬಹುದು.  ಹಿಂದೆ ಇದ್ದ ತಿರುವಾಂಕೂರ್ ದೊರೆಯ ಅರಮನೆ ಇಲ್ಲಿದೆ.  ಅದು ಬಲು ಆಕರ್ಷಕ.  ತಿರುವನಂತಪುರದಲ್ಲಿರುವ ಪ್ರಾಣಿಸಂಗ್ರಹಾಲಯ ಭಾರತದ ಅತ್ಯುತ್ತಮ ಪ್ರಾಣಿಸಂಗ್ರಹಾಲಯಗಳಲ್ಲೊಂದು ಎಂಬ ಖ್ಯಾತಿ ಗಳಿಸಿದೆ.  ಶ್ರೀಚಿತ್ರಾಲಯಂ ಎಂಬುದು ಇಲ್ಲಿರುವ ಒಂದು ಪ್ರಸಿದ್ಧ ಚಿತ್ರಕಲಾಶಾಲೆ.  ಇದರಲ್ಲಿ ರಾಜಾ ರವಿವರ್ಮನ ಕಲಾಕೃತಿಗಳೂ ಸೇರಿದಂತೆ ಅನೇಕ ಚಿತ್ತಾಕರ್ಷಕ ಚಿತ್ರಕೃತಿಗಳನ್ನು ಪ್ರದರ್ಶಿಸಲಾಗಿದೆ.  ರಜಪೂತ, ಮೊಗಲ್ ಹಾಗೂ ತಂಜಾವೂರು ಸಂಪ್ರದಾಯದ ಕಲಾಕೃತಿಗಳೂ ಅಜಂತ ಮತ್ತು ಸಿಗ್ರಿಯ ಭಿತ್ತಿಚಿತ್ರಗಳೂ ಚೀನ, ಜಪಾನ್, ಟಿಬೆಟ್ ಮತ್ತು ಬಾಲಿ ಶೈಲಿಯ ಕೃತಿಗಳೂ ಆಧುನಿಕ ಭಾರತೀಯ ಚಿತ್ರಕಾರರು ಕ್ಯಾನ್ ವಾಸಿನ ಮೇಲೆ ಮೂಡಿಸಿರುವಂಥ ಚಿತ್ರಕೃತಿಗಳೂ ಇವೆ.  ಹಿಂದೂ ನಂಬಿಕೆಯ ಪ್ರಕಾರ 108 ದಿವ್ಯ ದೇಶಗಳಲ್ಲಿ ತಿರುವನಂತಪುರವೂ ಒಂದು.  ಇಲ್ಲಿಯ ಅನಂತಪದ್ಮನಾಭಸ್ವಾಮಿ ದೇವಾಲಯ ಬಹಳ ಪ್ರಸಿದ್ಧವಾದ್ದು. ತಿರುವನಂತಪುರದಲ್ಲಿ ಮತ್ಸ್ಯಪಾಲನಾಗಾರವಿದೆ.  ಇದು ಸಾಗರ ಜೀವವಿಜ್ಞಾನಿಗಳಿಗೂ ಮತ್ಸ್ಯೋದಮಿಗಳಿಗೂ ಉಪಯುಕ್ತವಾಗಿದೆ.  ಕೋವಲಮ್ ಬೀಚ್ ಇರುವುದು ಈ ನಗರಕ್ಕೆ ಹತ್ತು ಮೈ. ದೂರದಲ್ಲಿ.  ಇದು ಒಂದು ವಿಹಾರ ಸ್ಥಳ.

ತಿರುವನಂತಪುರ ಕೇರಳ ವಿಶ್ವವಿದ್ಯಾಲಯದ ಕೇಂದ್ರ.  ಇಲ್ಲಿ ಅನೇಕ ಶಾಲಾ ಕಾಲೇಜುಗಳಿವೆ.  ಹತ್ತಿ ಜವಳಿ, ಸಾಬೂನು, ರಬ್ಬರ್, ಹಗ್ಗ, ಚಾಪೆ, ಪ್ಲೈವುಡ್ ಮೊದಲಾದವು ತಿರುವನಂತಪುರದಲ್ಲಿ ತಯಾರಾಗುವ ಪದಾರ್ಥಗಳು.
(ಎಸ್.ಎನ್.ಎಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ